Saturday, March 7, 2009

ಜಯರಾಮ ಕಾರಂತ್ ಅವರು ಮೊಗಸಾಲೆಯವರ ಬಗ್ಗೆ ಬರೆದ ಬರೆಹ

೬೦ ಶ್ರಾವಣ ಕಂಡ ಕನ್ನಡ ಕಟ್ಟೋಣದ ಮೊಗಸಾಲೆ
ಸಾಹಿತಿ ಹಾಗೂ ಸಾಹಿತ್ಯ ಪರಿಚಾರಕ ಡಾ. ನಾ. ಮೊಗಸಾಲೆ ಈ ಆಗಸ್ಟ್ ೨೦೦೪ಕ್ಕೆ ೬೦ನೆಯ ಹರೆಯಕ್ಕೆ ಕಾಲಿರಿಸಿದ್ದಾರೆ. ಕಾಂತಾವರದಂಥ ಕರ್ನಾಟಕದ ಹಳ್ಳಿ ಮೂಲೆಯೊಂದರಲ್ಲಿ ಅವರು ನಡೆಸಿರುವ ಸಾಹಿತ್ಯ ಪರಿಚರ್ಯೆಯ ಅತ್ಮೀಯ ಅವಲೋಕನ ಇಲ್ಲಿದೆ.ಜಯರಾಮ ಕಾರಂತ ತರಂಗ ಸಪ್ಟಂಬರ್ ೧೬ ೨೦೦೪ ಪುಟ ೨೮-೨೯.

ಅವರಿಗೆ ಹೇಳಿಕೊಳ್ಳುವಂಥ ಇಂಪ್ರೆಸಿವ್ ಪರ್ಸನಾಲಿಟಿಇಲ್ಲ / ಇಲ್ಲ ನಮ್ಮ ಕೃತಕ ಪೋಸು / ಒಬ್ಬ ಹಳ್ಳಿ ರೈತನಲ್ಲಿ ನೀವು ನನ್ನ ಮಾಸ್ತರರನ್ನು ಕಾಣಬಹುದು- ಇವು ಕವಿ ಡಾ. ನಾ. ಮೊಗಸಾಲೆ ಅವರ ಮೊಗಸಾಲೆಯ ನೆನಪುಗಳು ಎಂಬ ಸಂಕಲನ (೧೯೮೩) ದಲ್ಲಿನ ಒಂದು ಪದ್ಯದ ಸಾಲುಗಳು.
ತನ್ನ ಗುರುವಾದ ಹಳ್ಳಿಯ ಶಿಕ್ಷಕನೊಬ್ಬನ ಕುರಿತು ಅವರು ಬರೆದಿರುವ ಈ ಸಾಲುಗಳಲ್ಲಿ ಕೊನೆಯದು ೬೦ನೆಯ ವಯಸ್ಸನ್ನು ತಲುಪಿರುವ ಅವರಿಗೇ ಅನ್ವಯಿಸುತ್ತದೆ!
ಕವಿ, ಕಾದಂಬರಿಗಾರ, ಕಥೆಗಾರ, ಸಾಹಿತ್ಯ ಪರಿಚಾರಕ ಮೊಗಸಾಲೆಯವರ ಹುಟ್ಟೂರು ಈಗ ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಫಿರ್ಕದ ಕೋಳ್ಯೂರು. ಅಂಥ ಗ್ರಾಮೀಣ ಪರಿಸರದಿಂದ ಸ್ವಲ್ಪ ಕಾಲ ದೂರಾಗಿ ಉಡುಪಿಯಂಥ ಬೆಳೆಯುತ್ತಿದ್ದ ಪಟ್ಟಣವೊಂದರಲ್ಲಿ ಅವರು ಆಯುರ್ವೇದ ಕಲಿತರು. ಆಮೇಲೆ ಗ್ರಾಮೀಣ ವೈದ್ಯಾಧಿಕಾರಿಯಾಗಿ ಕೋಳ್ಯೂರನ್ನೇ ನೆನಪಿಸುವಂತಿದ್ದ ಕಾರ್ಕಳ ತಾಲೂಕಿನ ಕಾಂತಾವರ ಎಂಬ ಹಳ್ಳಿಗೆ ಬಂದರು. ಅಲ್ಲೇ ನೆಲೆ ನಿಂತರು. ಅಲ್ಲಿನ ಹುಡುಗಿಯನ್ನೇ ಮದುವೆಯಾದರು. ವೃತ್ತಿಯೊಂದಿಗೆ ಲೇಖಕೀಯ ಪ್ರವೃತ್ತಿಯೂ ಬೆರೆತಿದ್ದುದರಿಂದ ಅದರ ಬೆಳವಣಿಗೆಗೆ ತಕ್ಕ ಆಡುಂಬೊಲವನ್ನು ತಾನಿದ್ದಲ್ಲೇ ನಿರ್ಮಿಸಿಕೊಂಡರು. ಹಳ್ಳಿ ಮೂಲೆಯೊಂದರಲ್ಲಿ ಕೂಡಿ ಯುವ ಸಂಘಟನೆ, ಕನ್ನಡ ಕಟ್ಟುವ ಕೆಲಸ ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.
ನಮ್ಮ ದೇಶದ ಭವಿಷ್ಯದ ಬೀಜ ಹಳ್ಳಿಗಳಲ್ಲಿದೆ ಎಂಬರ್ಥದ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಒಂದು ಭಾಷೆಯ ಉತ್ಕರ್ಷದ ಬಗೆಗಿನ ಆಸಕ್ತಿಯಾಗಲಿ, ದೇಶದ ಅರ್ಥವ್ಯವಸ್ಥೆಯ ರೂಪುರೇಖೆಯಾಗಲಿ ಮೂಡುವುದು ಹಳ್ಳಿಗಳಲ್ಲೇ. ಜಗತ್ತಿನ ನಾನಾ ಸಂಸ್ಕೃತಿಗಳ ಮೂಲ ತಾಣಗಳು ಗ್ರಾಮಗಳೇ ಆಗಿವೆ.
ಹೀಗೆಂದು ವಾದಿಸುತ್ತ ನಾವು ಹಳ್ಳಿಗಳನ್ನು ಕಣ್ಣು ಮುಚ್ಚಿ ಕೀರ್ತಿಸಬಹುದು. ಆದರೆ ಪೇಟೆಗಳಿಂದ / ನಗರಗಳಿಂದ ಹಳ್ಳಿಗಳಿಗೆ ಹೋಗಿ ನೆಲೆಸೋಣವೆಂಬ ಉತ್ಸಾಹ ಸುಶಿಕ್ಷಿತ ಪಟ್ಟಣಪ್ರಿಯರಿಗೆ ಬರುವುದು ಸಾಧ್ಯವೇ ಇಲ್ಲ. ಅದರಲ್ಲೂ ಮೂರು - ನಾಲ್ಕು ದಶಕಗಳ ಹಿಂದೆ ಹೀಗೆ ಹಳ್ಳಿಗೆ ಮುಖಮಾಡುವ ವೈದ್ಯರಾಗಲಿ, ಶಿಕ್ಷಕರಾಗಲಿ ಹೆಚ್ಚು ಸಂಖ್ಯೆಯಲ್ಲಿ ಇರಲಿಲ್ಲ. ಏಕೆಂದರೆ, ಆಗ ನಮ್ಮ ಹೆಚ್ಚಿನ ಹಳ್ಳಿಗಳು ಕಗ್ಗಾಡ ಕೊಂಪೆಗಳಾಗಿದ್ದವು; ವಿದ್ಯುತ್-ಸಾರಿಗೆ ಸಂಪರ್ಕವಿಲ್ಲದ ದ್ವೀಪಗಳಾಗಿದ್ದವು.
ಆದರೆ ಮೊಗಸಾಲೆ ೧೯೬೦ರ ದಶಕದಲ್ಲಿ ಆಯ್ದುಕೊಂಡದ್ದು ದಕ್ಷಿಣ ಕನ್ನಡ (ಈಗ ಉಡುಪಿ) ಜಿಲ್ಲೆಯ ಕಾಂತಾವರ ಎಂಬ ಒಂದು ಹಳ್ಳಿಯನ್ನು. ಅಲ್ಲಿ ಅವರು ಅರೆ ಸರಕಾರಿ ವೈದ್ಯಾಧಿಕಾರಿಯಾಗಿ ಅರ್ಧ ಸಂಬಳಕ್ಕೆ


ದುಡಿದರು. ಖಾಸಗಿ ದವಾಖಾನೆ ತೆರೆದು ಮಧ್ಯಾಹ್ನದ ಬಳಿಕದ ತಾಸುಗಳನ್ನು ಗ್ರಾಮೀಣ ಮುಗ್ಧರ ಚಿಕಿತ್ಸೆಯ ಅಗತ್ಯಗಳಿಗಾಗಿ ಮೀಸಲಿಟ್ಟರು. ಊರ ರೈತ ಯುವಕರನ್ನು, ಶಿಕ್ಷಕ ಬಂಧುಗಳನ್ನು ಸಂಘಟಿಸಿದರು; ರೈತ ಯುವಕ ವೃಂದವನ್ನು ಕಟ್ಟಿದರು. ಕೃಷಿ ಮತ್ತು ಲಲಿತಕಲೆಗಳಲ್ಲಿನ ಅವರ ಆಸಕ್ತಿಗಳಿಗೆ ಒತ್ತಾಸೆ ಕೊಟ್ಟರು.
ಅಮೇಲೆ ೧೯೭೬ರ ಹೊತ್ತಿಗೆ ಸಮಾನ ಆಸಕ್ತರನ್ನು ಹುರಿದುಂಬಿಸಿ ಕಾಂತಾವರ, ಬೆಳುವಾಯಿ, ಬೋಳ ಕೆದಿಂಜೆ, ನಂದಳಿಕೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ದೀಕ್ಷೆ ಹೊತ್ತ ಕಾಂತಾವರ ಕನ್ನಡ ಸಂಘದ ಸ್ಥಾಪನೆ. ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಂಕೀರ್ಣಗಳು. ವಿಶೇಷ ಉಪನ್ಯಾಸ ಮಾಲಿಕೆಗಳು. ವಿದ್ವತ್ ಸಮ್ಮಾನಗಳು. ದಕ್ಷಿಣ ಕನ್ನಡ ಕಾವ್ಯ ಸಂಪುಟದಂಥ ಪ್ರಕಟನೆಗಳು. ೧೯೭೭ರಲ್ಲಿ ಅಖಿಲ ಕರ್ನಾಟಕ ಮಟ್ಟದ ಮುದ್ದಣ ಕಾವ್ಯ ಸ್ಪರ್ಧೆ- ಮುದ್ದಣ ಪ್ರಶಸ್ತಿ ಯೋಜನೆಯ ಆರಂಭ. ೧೯೭೮ರಲ್ಲಿ ನೆರೆಯ ಮೂಡುಬಿದಿರೆಯಲ್ಲಿ ವಧಮಾನ ಪ್ರಶಸ್ತಿ ಪೀಠದ ಸ್ಥಾಪನೆಗೂ ಅವರೇ ಕಾರಣರಾದರು. ಅಂದಿನಿಂದಿಂದಿನವರೆಗೂ ಅದರ ಪ್ರಧಾನ ನಿರ್ದೇಶಕರಾಗಿ ಕಾಂತಾವರ ಕನ್ನಡ ಸಂಘದ ಕಾರ್ಯಧ್ಯಕ್ಷರಾಗಿ ಅವರು ತ್ರಿಕರಣಪೂರ್ವಕ ಕಾರ್ಯನಿರ್ವಹಿಸುತ್ತಿದ್ದಾರೆ. ಮೊನ್ನೆ ಮೊನ್ನೆ ಕಾಂತಾವರ ಮೂಲದ ರಾಷ್ಟ್ರಮಟ್ಟದ ರಾಜಕಾರಣಿ, ಏಕೀಕರಣ ಚಳುವಳಿಯ ನಾಯಕ ಬಾರಾಡಿ ಜಿನರಾಜ ಬಲ್ಲಾಳರ ಜನ್ಮಶತಮಾನೋತ್ಸವದ ನೆನಪಿಗಾಗಿ ಕಾಂತಾವರದಲ್ಲಿ ತಲೆಯೆತ್ತಿದ ಕನ್ನಡ ಭವನದ ಕೆಲಸದಲ್ಲೂ ಅವರು ಸದ್ದಿಲ್ಲದೆ ಭಾಗಿಯಾಗಿದ್ದಾರೆ.
ಗ್ರಾಮೀಣ ಸಾಹಸ
ಇಂದು ಕಂತಾವರ ಕನ್ನಡ ಸಂಘ ಹಾಗೂ ವರ್ಧಮಾನ ಪ್ರಶಸ್ತಿ ಪೀಠ ಕರ್ನಾಟಕದ ಉದ್ದಗಲಗಳಲ್ಲಿ ಸುಪರಿಚಿತ. ಅವು ನೀಡುವ ಪ್ರಶಸ್ತಿಗಳಿಗೆ ಅವುಗಳದೇ ಆದ ಒಂದು ತೂಕವಿದೆ. ಹಳ್ಳಿಗಳಲ್ಲಿ ನೆಲೆಸಿದ ಸಾಹಿತ್ಯ ಸಂಘಟನೆಗಳು ಮನಸ್ಸು ಮಾಡಿದರೆ ಏನನ್ನೂ ಸಾಧಿಸಿಯಾವು ಎಂಬುದಕ್ಕೆ ಈ ಸಂಸ್ಥೆಗಳು ಉದಾಹರಣೆಗಳು. ಇವುಗಳ ಹಿಂದಿರುವುದು ಮೊಗಸಾಲೆಯವರ ಕರ್ತವ್ಯಶೀಲ ಮನಸ್ಸು.
ಇದಕ್ಕೆಲ್ಲ ಕಾರಣ ಮೊಗಸಾಲೆಯೇ ಎಂದರೆ ಅವರೇ ಒಪ್ಪಲಾರರು! ವರ್ಧಮಾನ ಪ್ರಶಸ್ತಿ ಪೀಠದ ಯಶಸ್ವಿತೆಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಕುಲ್ಯಾಡಿ ಮಾಧವ ಪೈ, ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕವರ್ಯ ಸ್ವಾಮೀಜಿ, ಶ್ರೀಪಾಲ್ ಎಸ್. ಅವರಂಥವರು ಕಾರಣವೆಂದು ಹೇಳಿಯಾರು. ಕಾಂತಾವರ ಕನ್ನಡ ಸಂಘದ ಬೆಳವಣಿಗೆಯ ಹಿಂದೆ ಹರಿಕೃಷ್ಣ ಪುನರೂರು, ಕಾಂತಾವರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ, ವಿಠಲ ಬೇಲಾಡಿ, ನಂದಳಿಕೆ ಬಾಲಚಂದ್ರ ರಾವ್, ಟಿ. ದಿವಾಕರ ರಾವ್, ಜನಾದನ ಭಟ್‌ರಂಥವರು ಇದ್ದಾರೆ ಎಂದಾರು. ಸಂಘದ ವ್ಯಾಪ್ತಿಯ ಗ್ರಾಮಗಳ ಹತ್ತು-ಹಲವು ತರುಣ ಮಿತ್ರರತ್ತ ಬೆಟ್ಟುಮಾಡಿಯಾರು.
ಮೊಗಸಾಲೆ ಕೃತಿಗಳು
ಕಾದಂಬರಿ: ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ತೊಟ್ಟಿ, ಉಪ್ಪು, ಪಂಥ, ಅರ್ಥ,
ಕವಿತೆ: ವರ್ತಮಾನದ ಮುಖಗಳು ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ,.
ವೈದ್ಯಕೀಯ: ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ಆರೋಗ್ಯ ಅನಾರೋಗ್ಯದ ನಡುವೆ, ಆರೋಗ್ಯ ಅನಾರೋಗ್ಯದ ನಡುವೆ ಆಯ್ಕೆ ಇದೆಯೇ, ಹೆಣ್ಣು ಹೆಣ್ಣನ್ನು ಅರಿಯುವ ಬಗೆ,.
ಗೀತನಾಟಕ ಪುರೂರವ,
ಸಾಹಿತ್ಯ ಕೃಷಿ
ಸಹೃದಯದಲ್ಲದವನು ಸಾಹಿತ್ಯ ಪ್ರೇಮಿಯೂ ಆಗಲಾರ, ಸಾಹಿತ್ಯ ವ್ಯವಸಾಯಿಯೂ ಆಗಲಾರ ಎಂಬುದಕ್ಕೆ ಮೊಗಸಾಲೆ ಒಳ್ಳೆಯ ಉದಾಹರಣೆ. ಅವರು ಸ್ವಭಾವತಃ ಸ್ನೇಹಶೀಲ. ಗೆಳೆತನದಲ್ಲಿ ಸಾರ್ಥಕತೆಯನ್ನರಸುವ ವ್ಯಕ್ತಿ. ಅವರ ಸಾಹಿತ್ಯ ಸಂಘಟನೆಯ ಚಟುವಟಿಕೆಗಳ ಹಿಂದಿನ ಉದ್ದೇಶವೇ ಮಿತ್ರರ ಬಳಗವನ್ನು ವಿಸ್ತರಿಸಿಕೊಳ್ಳುವುದು ಎನ್ನಬಹುದು. ವರ್ತಮಾನದ ಮುಖಗಳು ಸಂಕಲನದಿಂದ ಹಿಡಿದು ಇದಲ್ಲ ಇದಲ್ಲದ ತನಕ ಏಳು ಕವಿತಾ ಸಂಕಲನಗಳನ್ನು, ನನ್ನದಲ್ಲದ್ದು, ಪ್ರಕೃತಿ, ಪಂಥ, ದಂಥ ೧೪ ಕಾದಂಬರಿಗಳನ್ನು, ಹಲವು ಸಣ್ಣ ಕತೆಗಳನ್ನು ಪ್ರಕಟಿಸಿರುವ ಅವರು ತನ್ನ ಕೃತಿಗಳಲ್ಲಿ ಶೋಧಿಸುವುದು ಇಂಥ ಸಹೃದಯಿಗಳನ್ನೇ. ಅವರ ಕವಿತೆಗಳಲ್ಲಿ ಸ್ನೇಹ ವಿಶ್ವಾಸಗಳಿಗಾಗಿ ತುಡಿಯುವ ಒಬ್ಬ ಹೆಸರಿಲ್ಲದ ವ್ಯಕ್ತಿ ಸಹೃದಯೀ ಸಮೂಹವನ್ನದ್ದೇಶಿಸಿ ಅನೌಪಚಾರಿಕವಾಗಿ ಮಾತನಾಡುತ್ತಿರುವುದನ್ನು ನೋಡಬಹುದು. ಸಾಮಾನ್ಯ ಮನುಷ್ಯನನ್ನು ಅವನ ಎದೆಯೊಳಗಿನ ಆತಂಕ-ಪುಳಕ-ನಿರೀಕ್ಷೆ-ನಿರಾಸೆಗಳನ್ನು ಚಿತ್ರಿಸಿಯೇನೆಂಬ ತುಡಿತ ಅವರ ಬಹುತೇಕ ಕವನಗಳ ಹಿಂದಿನ ಆಶಯ. ವೈಯುಕ್ತಿಕ ಹಾಗೂ ಸಾಮಾಜಿಕ ಸಂಬಂಧಗಳ ವಿಶ್ಲೇಷಣೆ ಅವರ ಹೆಚ್ಚಿನ ಕಾದಂಬರಿಗಳ ಹಿಂದಿನ ಕಾಳಜಿ. ಅವರು ಕವಿತೆಗಳಲ್ಲಿ ನಿತ್ಯಮಾತುಗಳಿಂದಲೇ ಹೊಸ ಹೊಸ ರೂಪಕಗಳನ್ನು ಕಟ್ಟುತ್ತ ಧರ್ಮ, ರಾಜಕಾರಣ ಹಾಗೂ ಸೈದ್ದಾಂತಿಕ ಬದ್ಧತೆಗಳ ಬೇಡಿಗಳನ್ನು ತುಂಡರಿಸುವ ಬಗೆ ಹೇಗೆಂಬುದನ್ನು ಚಿಂತಿಸುತ್ತಾರೆ. ಅವರ ಕಥೆ ಹಾಗೂ ಕಾದಂಬರಿಗಳಲ್ಲಿ ಈ ಚಿಂತನೆ ವಿಡಂಬನೆಯ ಕೊರಡೆಯೊಂದಿಗೆ, ಕವಿಯೊಬ್ಬನ ದುಗುಡದೊಂದಿಗೆ ವೈವಿಧ್ಯಮಯ ವಿನ್ಯಾಸಗಳಲ್ಲಿ ದಾಖಲಾಗಿದೆ. ಅವರ ಮೂಲ ಉದ್ದೇಶ, ಮನುಷ್ಯರ ನಡುವಿನ ವಿಶ್ವಾಸ ನಿತ್ಯದ ಬದುಕಿಗೆ ಶ್ವಾಸವೂಡದಿದ್ದಲ್ಲಿ ಎಲ್ಲವೂ ವ್ಯರ್ಥವಲ್ಲವೇ ಎಂದು ಪ್ರಶ್ನಿಸುವುದಾಗಿದೆ. ತನ್ನನ್ನು ಸಂಪರ್ಕಿಸುವ ಯಾವನೇ ವ್ಯಕ್ತಿಯಿರಲಿ ಅವನ ಜಾತಿ, ಪಂಥ, ಹುದ್ದೆ, ಸೈದ್ಧಾಂತಿಕ ಒಲವುಗಳಿಗೆ ಬೆಲೆ ಕೊಡಬೇಕೇ ಅಥವಾ ಅವನ ಸರಳ-ಸ್ನೇಹಶೀಲ ನಡವಳಿಕೆಗೇ ಎಂಬ ಪ್ರಶ್ನೆ ಅವರನ್ನೆಂದೂ ಬಾಧಿಸುವುದಿಲ್ಲ! ಏಕೆಂದರೆ, ಅವರ ಆಯ್ಕೆ ನಿಸ್ಸಂಶಯವಾಗಿ ಎರಡನೆಯದೇ!
ಎಲ್ಲರ ಮಿತ್ರ
ಹೀಗಾಗಿಯೇ ಅವರ ಸ್ನೇಹಿತರ ಬಳಗ ದೊಡ್ಡದು-ಅದರಲ್ಲಿ ಸಮಾಜದ ಆಢ್ಯರಿದ್ದಾರೆ. ಧಾರ್ಮಿಕ ಮುಖಂಡರಿದ್ದಾರೆ, ನಾಸ್ತಿಕರೆನಿಸಿಕೊಂಡ ಬುದ್ಧಿಜೀವಿಗಳೂ ಇದ್ದಾರೆ; ರಾಜಕೀಯ ಮುಖಂಡರಿದ್ದಾರೆ, ಉದ್ಯಮಿಗಳಿದ್ದಾರೆ, ಕವಿ ಕಲಾವಿದ ಶಿಕ್ಷಕರಿದ್ದಾರೆ, ಕಾರ್ಮಿಕರಿದ್ದಾರೆ, ಸಮಾಜ ಸೇವಕರಿದ್ದಾರೆ, ಸಾಹಿತ್ಯವೆಂದರೆ ಏನೆಂದು ಅರಿಯದ ವೆಂಕ ನಾಣಿ ಶೀನಿಗಳೂ ಇದ್ದಾರೆ.
ಸಾಹಿತಿ ಮಿತ್ರರ, ಸಂಘಟನಾ ಸಹವ್ಯಸನಿಗಳ ಅಭಿಮಾನಕ್ಕೆ ಹೇಗೋ ಹಾಗೆ ಟೀಕೆ-ಟಿಪ್ಪಣಿಗಳಿಗೂ ಅವರು ತುತ್ತಾಗಿದ್ದಾರೆ, ಅವರು ಸಾಹಿತ್ಯ ಕೃಷಿಗಷ್ಟೇ ತನ್ನ ಗಮನವನ್ನು ನೀಡಿದಿದ್ದರೆ ತಿದ್ದಿ ತೀಡಿ ಬರೆದಿದ್ದರೆ ಇನ್ನಷ್ಟು ನಯ, ನಾಜೂಕುಗಳು ಅವರ ಕೃತಿಗಳಿಗೆ ಲಭಿಸಬಹುದಿತ್ತು ಎನ್ನುವವರಿದ್ದಾರೆ. ಆದರೆ ಸಾಹಿತ್ಯ ಪರಿಚರ್ಯೆಯನ್ನು ಅವರು ಬಡಪೆಟ್ಟಿಗೆ ಕೈ ಬಿಡಲಾರರು! ಅದರೊಂದಿಗಿನ ಅವರ ದಾಂಪತ್ಯ ೩೫ ವರ್ಷಗಳಷ್ಟು ಹಳೆಯದು!
ಮೊದಲೇ ಹೇಳಿದಂತೆ ಮೊಗಸಾಲೆ ನಾನ್-ಅಕಾಡೆಮಿಕ್ ಮನುಷ್ಯ. ಅವರ ಪ್ರತಿಭೆ ಕಾಡಬಳ್ಳಿಯ ತರಹದ್ದು. ಕನ್ನಡ ಸಾಹಿತ್ಯದ ವಿವಿಧ ಪಂಥಗಳ ಒಳ್ಳೆಯ ಅಂಶಗಳನ್ನು ಸ್ವಾಧ್ಯಾಯಿಯಾದ ಅವರು ತನ್ನ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಅವರ ಈ ಕೃತಿಗಳಲ್ಲಿ ನಮಗೆ ಸಿಕ್ಕುವುದು ಅಕಾಡೆಮಿಕ್ ಶಿಸ್ತಿಗೆ ಸಿಕ್ಕದ ಮೊಗಸಾಲೆಯೇ! ಅವರ ಕಾರ್ಯ ವ್ಯವಹಾರ ಶೈಲಿಯೂ ಅವರದೇ; ಸರಳ ಹಾಗೂ ಪರಿಣಾಮಕಾರಿ. ವಿಮರ್ಶೆಗೆ ಸಿಗದೆ ಉಳಿದುಕೊಳ್ಳುವಂಥ ರೀತಿಯದು!
ತನ್ನ ಸಂಪರ್ಕಕ್ಕೆ ಬರುವ ಎಲ್ಲರಲ್ಲೂ ಸಾರ್ಥಕಭಾವವನ್ನು ಹುಟ್ಟಿಸುವಂಥ ಬೆಚ್ಚಗಿನ ನಡೆವಳಿಕೆ ಅವರದು. ಕನ್ನಡ ಸಂಘದ ಯವುದೋ ಒಂದು ಕೆಲಸವಾಗಬೇಕಾದರೆ, ಯಾರು ಇದಕ್ಕೆ ಅರ್ಹ ವ್ಯಕ್ತಿ ಎಂಬುದನ್ನು ಅವರು ಕರಾರುವಕ್ಕಾಗಿ ನಿರ್ಧರಿಸುತ್ತಾರೆ. ಸ್ನೇಹದಿಂದ ಅವರನ್ನು ಒಲಿಸಿಕೊಂಡು ತನ್ನ ಯೋಜನೆಯನ್ನು ಅವರ ಮುಂದಿರಿಸಿರುತ್ತಾರೆ. ಇವರ, ಸರಳತೆ ಪ್ರಾಮಾಣಿಕತೆ ಹಾಗೂ ಸಂಕಲ್ಪದ ತೀವ್ರತೆ ಅವರಿಂದ ಆ ಕೆಲಸವನ್ನು ಮಾಡಿಸಿಬಿಡುತ್ತದೆ!
ಅವರು ತಮ್ಮ ಕಾವ್ಯ, ಕಾದಂಬರಿಗಳಿಗಾಗಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ (ಬಿ.ಎಚ್.ಶ್ರೀಧರ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ದಿನಕರ ದೇಸಾಯಿ ದತ್ತಿ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ಸಾಹಿತ್ಯ ಅಕೆಡಾಮಿ ಪ್ರಶಸ್ತಿ ಇತ್ಯಾದಿ). ಅವರ ಆರೋಗ್ಯ ವಿಷಯಕ ಅಂಕಣ ಬರಹಗಳ ಸಂಕಲನವೊಂದಕ್ಕೂ ಪುರಸ್ಕಾರ ಲಭಿಸಿದೆ. ತನ್ನ ಬರವಣಿಗೆಯ ಕುರಿತು ಅವರು ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ-ಪ್ರತಿ ಸಲದ ಬರವಣಿಗೆಯೂ ನನಗೆ ಸವಾಲೇ ಆಗಿರುವುದರಿಂದ ನನ್ನ ಬರವಣಿಗೆಯನ್ನು ನವೋದಯವೋ ನವ್ಯವೋ ನವ್ಯೋತ್ತರವೋ ಎಂದು ವರ್ಗೀಕರಿಸಲು ನಾನು ನನಗಾಗಿ ಎಷ್ಟೋ ಅಷ್ಟೇ ಸಹೃದಯಿಗಳಿಗೆ ಏನು ಹೇಳಬೇಕಾಗಿದೆಯೆಂಬುದೇ ನನಗೆ ಮುಖ್ಯ. ಈಚೆಗೆ ಆಂಜೈನದಂಥ ಹೃತ್ ಸಂಬಂಧಿ ತೊಂದರೆಗೊಳಗಾಗಿ ಚೇತರಿಸಿಕೊಂಡಿರುವ ಅವರು ಮತ್ತೆ ಬರವಣಿಗೆಯ ಮೇಜಿನತ್ತ ಹಾಗೂ ಸಾಹಿತ್ಯ ಸಂಘಟನೆಯತ್ತ ಮೊಗ ಮಾಡಿರುವುದು ಸಂತಸದ ಸಂಗತಿ.
ಅವರ ಪತ್ನಿ ಪ್ರೇಮಾ ಅವರ ಸಾಧನೆಗಳ ಹಿಂದಿರುವ ಕಾಂತಾವರದ ಒಂದು ಶಕ್ತಿ. ಮೊಗಸಾಲೆಯ ಸ್ನೇಹ ವರ್ತುಲದಲ್ಲಿರುವ ಎಲ್ಲರ ಪಾಲಿಗೆ ಇವರು ಪ್ರೇಮಕ್ಕ. ಮೂವರು ಗಂಡು ಮಕ್ಕಳು-ಅವರೆಲ್ಲ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಅವರ ಇನ್ನಿಬ್ಬರು ಮಕ್ಕಳಾದ ಕಾಂತಾವರ ಕನ್ನಡ ಸಂಘ ಮತ್ತು ವರ್ಧಮಾನ ಪ್ರಶಸ್ತಿ ಪೀಠ-ಇವು ಅವರಿಗೆ ಹೇಗೋ ಕಾಂತಾವರಕ್ಕೂ ಹೆಸರು ತಂದಿವೆ. ಅವರ ಈ ಸಂಸಾರ ದೀರ್ಘಕಾಲ ಸುಖವಾಗಿ ಮುನ್ನಡೆಯಲಿ! ಅವರಲ್ಲಿ ಇನ್ನಷ್ಟು ಬರವಣಿಗೆ ನಡೆಸುವ, ಕನ್ನಡ ಸಂಘದ ಚಟುವಟಿಕೆಗಳಿಗೆ ಇನ್ನಷ್ಟು ಹೊಳಪು ನೀಡುವ ಆಕಾಂಕ್ಷೆಯಿದೆ. ಮುದ್ದಣ್ಣ ಕಾವ್ಯ ಪ್ರಶಸ್ತಿ ಯೋಜನೆಗೆ ೨೫ ವರ್ಷ ತುಂಬಿದ ಸಂಭ್ರಮಾರ್ಥ ಈ ನವೆಂಬರ್‌ನಲ್ಲಿ ರಾಜ್ಯಮಟ್ಟದ ಸಾಹಿತ್ಯೋತ್ಸವ, ಪುಸ್ತಕಗಳ ಪ್ರಕಟನೆಯಂಥ ಹೊಸ ಹೊಸ ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ. ಅವುಗಳನ್ನು ಸಾಕಾರಗೊಳಿಸಲು ತಕ್ಕ ಸ್ನೇಹ ಸಹಕಾರದ ಹಸ್ತಗಳು ಅವರಿಗೆ ದೊರಕಲಿ. ಆರೋಗ್ಯ-ಉತ್ಸಾಹಳೆಂಬ ಅವರ ರೆಕ್ಕೆಗಳು ದಣಿಯದಿರಲಿ.